ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹಿರಿಯ ಯಕ್ಷಗಾನ ಸೇವಕ ಕಸ್ತೂರಿ ವರದರಾಯ ಪೈ

ಲೇಖಕರು :
ಜಗನ್ನಾಥ ಶೆಟ್ಟಿ ಬಾಳ
ಮ೦ಗಳವಾರ, ಜುಲೈ 30 , 2013

ತೆಂಕುತಿಟ್ಟು ಯಕ್ಷಗಾನದಲ್ಲಿ ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮೇಳ ಸುರತ್ಕಲ್ ಇದಕ್ಕೆ ವಿಶಿಷ್ಟ ಸ್ಥಾನಮಾನ. ತೆಂಕುತಿಟ್ಟಿನ ಪ್ರಖ್ಯಾತ ಮತ್ತು ಹಿರಿಯ ಕಲಾವಿದರೆಲ್ಲರಿಗೂ ಸುರತ್ಕಲ್ ಮೇಳದ ನಂಟು ಇದ್ದೇ ಇದೆ. ಅದೊಂದು ರೀತಿಯಲ್ಲಿ ಉತ್ತಮ ತರಬೇತಿ ಕೇಂದ್ರವೂ ಹೌದು ಎಂದು ಹೇಳಬಹುದು. ಘಟ್ಟದ ಮೇಲೆ ವಿಶೇಷವಾಗಿ ಜನಮೆಚ್ಚುಗೆ ಪಡೆದು ಯಕ್ಷಗಾನ ಸೇವೆ ಮಾಡಿಕೊಂಡು ಬಂದಿರುವ ಈ ಮೇಳ ಸುಮಾರು ಒಂದು ದಶಕದ ಹಿಂದೆ ನೇಪಥ್ಯಕ್ಕೆ ಸರಿದಿದ್ದರೂ ಅದು ಜನರ ನೆನಪಲ್ಲಿ ಇನ್ನೂ ವಿಶೇಷ ಸ್ಥಾನ ಮಾನದೊಂದಿಗೆ ರಾರಾಜಿಸುತ್ತಿದೆ.

ಸುರತ್ಕಲ್ ಮೇಳದ ಬಗ್ಗೆ ಹೇಳುವಾಗ ಅದರ ಸ್ಥಾಪಕರಾದ ಕಸ್ತೂರಿ ವರದರಾಯ ಪೈ ಅವರ ಬಗ್ಗೆ ಉಲ್ಲೇಖ ಮಾಡಲೇಬೇಕಾಗುತ್ತದೆ. ಕಸ್ತೂರಿ ವೆಂಕಟ್ರಮಣ ಪೈ ಮತ್ತು ಕಮಲಾ ಭಾಯಿ ದಂಪತಿ ಪುತ್ರನಾಗಿ 1924ರಲ್ಲಿ ಜನಿಸಿರುವ ಕಸ್ತೂರಿ ವರದರಾಯ ಪೈ ಅವರು ನಾಲ್ಕು ದಶಕಗಳ ಕಾಲ ಸುರತ್ಕಲ್ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಇವರ ತಂದೆ ವೆಂಕಟ್ರಮಣ ಪೈ ಅವರು ಕೂಡ ಭಾಗವತರಾಗಿ, ಚೆಂಡೆಮದ್ದಳೆವಾದಕರಾಗಿ ಗುರುತಿಸಿಕೊಂಡವರು. ತಂದೆಯ ಯಕ್ಷಗಾನಾಸಕ್ತಿ ಪುತ್ರ ವರದರಾಯರಲ್ಲೂ ಪಡಿ ಮೂಡಿತ್ತು. ಎಳವೆಯಲ್ಲೇ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಲು ಕೂಡ ಇದೊಂದು ಉತ್ತಮ ಕಾರಣವಾಯಿತು. ಸಮಾನಮನಸ್ಕ ಕೆಲವರನ್ನು ಸೇರಿಸಿಕೊಂಡು ತಾಳಮದ್ದಳೆ ಕಾರ್ಯಕ್ರಮ ನಡೆಸುತ್ತಾ, ನವರಾತ್ರಿ ಯಕ್ಷಗಾನ ಪ್ರದರ್ಶಿಸುತ್ತಾ ಯಕ್ಷಗಾನದ ಹುಚ್ಚನ್ನು ಮತ್ತಷ್ಟು ಹೆಚ್ಚಿಸಿಕೊಂಡವರು ವರದರಾಯ ಪೈಗಳು. ಇವರ ಸೇವೆ ಯಕ್ಷಗಾನಕ್ಕೆ ವಿಶೇಷವಾಗಿ ಸಲ್ಲಬೇಕು ಎಂದು ಕಲಾಮಾತೆ ಭಾವಿಸಿದ್ದಳೋ ಏನೋ- ಅಂತೂ ಅವರಿಗೆ 1956ರಲ್ಲಿ ಮೈಸೂರು ಲಾಟರಿಯಲ್ಲಿ 25,000 ರೂ. ಬಹುಮಾನ ಸಿಕ್ಕಿತು. ಆಗ ಪೈಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದು ಹಣ ಸಿಕ್ಕಿದೆ ಎಂಬ ಕಾರಣಕ್ಕಾಗಿ ಅಲ್ಲ- ಯಕ್ಷಗಾನ ಮೇಳ ಆರಂಭಿಸಲು ಹಣದ ವ್ಯವಸ್ಥೆ ಆಯಿತಲ್ಲಾ ಎಂಬ ಕಾರಣಕ್ಕಾಗಿ ಆದ ಸಂತೋಷ!

ಹಣದ ವ್ಯವಸ್ಥೆ ಆದುದೇ ತಡ- ಅಗರಿ ಶ್ರೀನಿವಾಸ ಭಾಗವತರಂಥ ಕೆಲವರನ್ನು ಸೇರಿಸಿಕೊಂಡು ಸುರತ್ಕಲ್ ಮೇಳವನ್ನು ೧೯೫೭ರಲ್ಲಿ ಆರಂಭಿಸಿದರು ಪೈಗಳು. ತನ್ನ ಮೇಳಕ್ಕೆ ಪ್ರಮುಖ ಕಲಾವಿದರನ್ನು ಸೇರಿಸಿಕೊಂಡರು, ಮತ್ತೆ ಕೆಲವು ಆಸಕ್ತರನ್ನು ಸೇರಿಸಿಕೊಂಡು ಉತ್ತಮ ಕಲಾವಿದರಾಗಿ ರೂಪಿಸಿದರು. ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟೆ ಆನಂದ ಮಾಸ್ತರ್, ಕೋಳ್ಯೂರು ರಾಮಚಂದ್ರ ರಾವ್, ಏಕ್ಟರ್ ಜೋಷಿ, ಬಾಬು ಕುಡ್ತಡ್ಕ, ಅಗರಿ ರಘುರಾಮ, ಕುಂಬ್ಳೆ ಸುಂದರ್ ರಾವ್, ಜಲವಳ್ಳಿ ವೆಂಕಟೇಶ್, ಕೋಟ ವೈಕುಂಠ ಮೂರೂರು, ದೇವರು ಹೆಗಡೆ, ಮಧೂರು ಗಣಪತಿ ರಾವ್, ಬಾಯಾರು ಪ್ರಕಾಶ್‌ಚಂದ್ರ, ಜನಾರ್ಧನ ಗುಡಿಗಾರ, ಕೊಕ್ಕಡ ಈಶ್ವರ ಭಟ್, ವೇಣೂರು ಸುಂದರ ಆಚಾರಿ, ರಮೇಶ್ ಆಚಾರ‍್ಯ, ಪೂಕಳ ಲಕ್ಷ್ಮೀ ನಾರಾಯಣ ಭಟ್, ನಾರಾಯಣ ಹೆಗ್ಡೆ, ಶಿವರಾಮ ಜೋಗಿ, ಡಿ. ಮನೋಹರ್ ಕುಮಾರ್ ಸದಾಶಿವ ವೇಣೂರು, ಉಜಿರೆ ರಾಜ ಮುಂತಾದವರೆಲ್ಲರೂ ಈ ಮೇಳದಲ್ಲಿ ಸೇವೆ ಸಲ್ಲಿಸಿದವರೇ.

ಸುರತ್ಕಲ್ ಮೇಳವು ತುಳು ಯಕ್ಷಗಾನಕ್ಕೆ ವಿಶೇಷ ಸೇವೆ ಸಲ್ಲಿಸಿದ್ದರೂ, ಅದು ಕನ್ನಡದಲ್ಲೂ ಪ್ರಸಂಗಗಳನ್ನು ಪ್ರದರ್ಶಿಸಿ ಅಪಾರ ಸಾಧನೆ ಮೆರೆದಿದೆ. ಘಟ್ಟದ ಮೇಲೆ ಸುರತ್ಕಲ್ ಮೇಳಕ್ಕೆ ಸಿಗುತ್ತಿದ್ದ ಬೇಡಿಕೆ ಬೇರೆ ಯಾವ ಮೇಳಕ್ಕೂ ಇರಲಿಲ್ಲ ಎಂದು ಅನುಭವದ ಮೂಲಕ ಹೇಳುವ ಹಿರಿಯರು ಈಗಲೂ ಇದ್ದಾರೆ. ಇದನ್ನು ವರದರಾಯ ಪೈಗಳು ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ಪಾಪಣ್ಣ ವಿಜಯ- ಗುಣಸುಂದರಿ, ರಾಜಾ ಯಯಾತಿ, ನಳ ದಮಯಂತಿ, ತುಳುನಾಡ ಸಿರಿ, ಕೋಟಿ ಚೆನ್ನಯ್ಯ, ಕಾಂತಬಾರೆ-ಬುದಾಬಾರೆ, ಶನೀಶರ ಮಹಾತ್ಮೆ, ಭಕ್ತಮೀರಾ ಬಾಯಿ, ಮುಂತಾದವುಗಳು ಸುರತ್ಕಲ್ ಮೇಳದ ಕೆಲವು ಸೂಪರ್‌ಹಿಟ್ ಪ್ರಸಂಗಗ ಳಾಗಿದ್ದವು.

ಸುರತ್ಕಲ್ ಮೇಳದ ಯಜಮಾನನಾಗಿ ವರದರಾಯ ಪೈಗಳು ಸಾಕಷ್ಟು ಹೆಸರೂ ಗಳಿಸಿದರು, ಆರ್ಥಿಕವಾಗಿಯೂ ಸುಧಾರಿಸಿ ಕೊಂಡರು. ಸುಮಾರು ೪೩ ವರ್ಷಗಳ ಕಾಲ ಈ ಮೇಳವನ್ನು ಮುನ್ನಡೆಸಿದ್ದರು. ಇದೊಂದು ಸಾಧನೆಯೇ. ಬದಲಾವಣೆಯ ಗಾಳಿ, ಆಧುನಿಕತೆಯ ಸ್ಪರ್ಶ ಮುಂತಾದ ಹಲವು ಕಾರಣಗಳಿಂದಾಗಿ ೨೦೦೧ರಲ್ಲಿ ಸುರತ್ಕಲ್ ಮೇಳದ ತಿರುಗಾಟವನ್ನು ಸ್ಥಗಿತಗೊಳಿಸಬೇಕಾಗಿ ಬಂತು.

ಅದೇನೇ ಇದ್ದರೂ ಯಕ್ಷಗಾನಕ್ಕೆ ವರದರಾಯ ಪೈ ಅವರ ಕೊಡುಗೆ ಅಪಾರ. ಅವರಿಗೆ ಇನ್ನಷ್ಟು ಪ್ರಶಸ್ತಿ, ಸನ್ಮಾನಗಳು ಲಭಿಸಲಿ. ಇಬ್ಬರು ಪುತ್ರರು ಮತ್ತು ಮೂವರು ಹೆಣ್ಮಕ್ಕಳ ತಂದೆಯಾಗಿರುವ ವರದರಾಯ ಪೈ ಅವರು ಹೊಸ ತಲೆಮಾರಿನ ಯಕ್ಷಗಾನ ಪ್ರೇಮಿಗಳು ಮತ್ತು ಕಲಾವಿದರಿಗೆ ಮಾದರಿ ಯಾಗಲಿ, ಮಾರ್ಗದರ್ಶಕರಾಗಲಿ.



ಕೃಪೆ : www.jayakirana.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Taranath Hegde(9/8/2016)
Good article about kasturi Varadaraya Pai.In the same way Palli Somanath Hegde is one of the pioneer who revived Badaguthittu Yakshagana. He was the one who by giving commercial value to the Yakshagana, evolved the Yakshagana to the professional stage,there by Yakshagana to survive and flourish.Now lot of artists have become professionals and earning good money.He introduced Mr.Kalinga Navada,Keremane family and many more and gave 360 deegree twist to the Yakshagana. He invested his whole life savings to the revival of Yakshagana. It will be a tribute to him if you publish a article regarding him.
sandeep pai(6/6/2015)
Very nice article sir.I also felt happy that my grandfather anantha pai written some yaskshaganas are played by surathkal mela. It remembered me that.surathkal mela was really extraordinary ,descipline performance and nice artists.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ